ಒಂದು ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಆಪ್ತರಾಗಿದ್ದ ಆರ್.ಎಂ.ಮಂಜುನಾಥ ಗೌಡರು ಜೆಡಿಎಸ್ ಸೇರಿದ್ದಾರೆ. 2018ರ ಚುನಾವಣೆಯಲ್ಲಿ ಅವರು ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ ಸೇರಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಮಂಜುನಾಥ ಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮಂಜುನಾಥ ಗೌಡರು ಜೆಡಿಎಸ್ ಸೇರುತ್ತಿದ್ದಂತೆ ತೀರ್ಥಹಳ್ಳಿಯಲ್ಲಿಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 1,793 ಮತಗಳ ಅಂತರದಿಂದ ಸೋತಿದ್ದ ಮಂಜುನಾಥ ಗೌಡರು, ಜೆಡಿಎಸ್ ಸೇರಿರುವುದು ಕ್ಷೇತ್ರದ ರಾಜಕೀಯ ಚಿತ್ರವಣನ್ನು ಬದಲಾಯಿಸಿದೆ.
'ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಬದ್ಧವಾಗಿರುತ್ತೇನೆ ಎಂದು ದೇವೇಗೌಡರಿಗೆ ವಾಗ್ದಾನ ನೀಡಿದ್ದೇನೆ' ಎಂದು ಮಂಜುನಾಥ ಗೌಡರು ಹೇಳಿದ್ದಾರೆ. ತೀರ್ಥಹಳ್ಳಿಯ ಮತ್ತಷ್ಟ ನಾಯಕರು ಶೀಘ್ರದಲ್ಲಿಯೇ ಜೆಡಿಎಸ್ ಸೇರುವ ಸಾಧ್ಯತೆ ಇದೆ. 'ವಿವಿಧ ಪಕ್ಷಗಳ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ' ಎಂದು ಮಂಜುನಾಥ ಗೌಡರು ಕೆಲವು ದಿನಗಳ ಹಿಂದೆ ಹೇಳಿದ್ದರು.